ಭೀಮ - ಭಾರತದ ಇತಿಹಾಸದಲ್ಲಿ
ಈ ಹೆಸರಿನ ಅನೇಕ ದೊರೆಗಳು ಭಾರತದ ಇತಿಹಾಸದಲ್ಲಿ ಆಗಿ ಹೋಗಿದ್ದಾರೆ. ಅವರಲ್ಲಿಯ ಪ್ರಮುಖರ ಬಗ್ಗೆ ಇಲ್ಲಿ ಲೇಖನಗಳಿವೆ. 

ಭೀಮ I : ಗುಜರಾತಿನ ಒಬ್ಬ ಚೌಳುಕ್ಯ ದೊರೆ; ಆಳ್ವಿಕೆಯ ಕಾಲ 1022-64. ತಂದೆ ನಾಗರಾಜ, ತಾಯಿ ಲಕ್ಷ್ಮಿ. ಮುಸ್ಲಿಮ್ ಚರಿತ್ರಕಾರರು ಹೆಸರಿಸುವ ಅಣಹಿಲಪಾಟಕ ಅಥವಾ ಸಹದ್ವಾಲದ ದೊರೆ ಪರಮದೇವ ಮತ್ತು ಹೇಮಚಂದ್ರ ತನ್ನ ಹಮ್ಮೀರಮದಮರ್ದನದಲ್ಲಿ ಉಲ್ಲೇಖಿಸುವ ಹಮ್ಮುಕ ಈತನೆಂದೇ ಗುರುತಿಸಿದೆ. ಸಿಂಹಾಸನ ಏರಿದ ವರ್ಷದೊಳಗೇ ಈತ ಘಜ್ನೀಮಹಮದನ ದಾಳಿ ಎದುರಿಸಲು ವಿಫಲನಾಗಿ ರಾಜಧಾನಿಯನ್ನೇ ಬಿಟ್ಟು ಪಲಾಯನ ಮಾಡಿದ. ಸೋಮನಾಥ ದೇವಾಲಯದ ಸೂರೆಯಾಯಿತು. ಈತ ಚೇತರಿಸಿಕೊಂಡು, ಬಲವನ್ನು ಕೂಡಿಸಿಕೊಂಡು, ಯುದ್ಧಸನ್ನದ್ಧನಾಗುವಷ್ಟರಲ್ಲಿ ಮುಸ್ಲಿಮ್ ದೊರೆ ಆತುರಾತುರವಾಗಿ ಹಿಂತಿರುಗಿಬಿಟ್ಟಿದ್ದ.

	ಅಬು ಪ್ರದೇಶ ಆಳುತ್ತಿದ್ದ ಪರಮಾರ ದಂಡುಕ ಈತನ ವಿರುದ್ಧ ದಂಗೆ ಎದ್ದು ಪರಾಜಿತನಾಗಿ ಚಿತ್ರಕೂಟದಲ್ಲಿ ಆಶ್ರಯ ಪಡೆದ. ಅಬುವಿನಲ್ಲಿ ರಾಜಪ್ರತಿನಿಧಿಯಾಗಿ ನೇಮಿಸಲ್ಪಟ್ಟ ದಂಡನಾಯಕ ವಿಮಲನ ಸಲಹೆಯ ಮೇರೆ ಧಂಡುಕನನ್ನೇ ಸಾಮಂತ ರಾಜನಾಗಿ ಮಾಡಿದ. ಧಂಡುಕ ಮತ್ತೊಮ್ಮೆ 1042ರ ಸುಮಾರಿಗೆ ದಂಗೆ ಎದ್ದ. 1062ರ ಹೊತ್ತಿಗೆ ಅಬು ಈತನ ಆಡಳಿತಕ್ಕೆ ಸೇರಿತ್ತೆಂದು ತಿಳಿದುಬರುತ್ತದೆ. ಅನಂತರ ಈತ ಸಿಂಧ್ ದೊರೆಯನ್ನು ಸೋಲಿಸಿದ, ಭಿನ್ಮಲ್‍ನಲ್ಲಿ ಆಳುತ್ತಿದ್ದ ಪರಮಾರ ಕೃಷ್ಣದೇವನನ್ನು ಬಂಧಿಸಿದ. ಆದರೆ ನಡ್ಡುಲದ ಚಾಹಮಾನ ದೊರೆ ಬಲಪ್ರಸಾದ ಭೀಮನನ್ನು ಸೋಲಿಸಿ ಕೃಷ್ಣದೇವನನ್ನು ಸೆರೆಯಿಂದ ಬಿಡಿಸಿದ. ಅಹಿಲ್ಲ ಮತ್ತು ಅವನ ಚಿಕ್ಕಪ್ಪ ಅಣಹಿಲ್ಲರಿಂದಲೂ ಈತ ಸೋಲಿನ ಕಹಿ ಅನುಭವಿಸಿದ.

	ಮಾಳವದ ಪರಮಾರ ಭೋಜನ ಅವನತಿಯಲ್ಲಿ ಈತನ ಪಾತ್ರ ಪ್ರಮುಖವಾದ್ದು. ಕಲಚನರಿ ಲಕ್ಷ್ಮೀಕರ್ಣನ ನೆರವಿನಿಂದ ಈತ ಭೋಜನ ಮೇಲೆ ವಿಜಯ ಸಾಧಿಸಿದರೂ ಅನಂತರ ಲಕ್ಷ್ಮೀಕರ್ಣನೊಂದಿಗೆ ವಿರಸವೇರ್ಪಟ್ಟಿತು. ಭೋಜನ ಸ್ವರ್ಣ ಸಿಂಹಾಸನವನ್ನು ಲಕ್ಷ್ಮೀಕರ್ಣ ಭೀಮನಿಗೆ ಒಪ್ಪಿಸಬೇಕಾಯಿತೆಂದು ತಿಳಿಯುತ್ತದೆ.

	ಬಕುಲಾದೇವಿ ಹಾಗೂ ಉದಯಮತಿ ಈತನ ರಾಣಿಯರು. ಮೂಲರಾಜ, ಕರ್ಣ ಹಾಗೂ ಕ್ಷೇಮರಾಜ ಅಥವಾ ಹರಿಪಾಲ ಈತನ ಮಕ್ಕಳು. ಮೂಲರಾಜ ಚಿಕ್ಕವಯಸ್ಸಿನಲ್ಲೇ ಮೃತನಾದ. ಕ್ಷೇಮರಾಜ ಅಧಿಕಾರವನ್ನು ಬಯಸಲಿಲ್ಲ. ಕರ್ಣ ತಂದೆಯ ತರುವಾಯ ಪಟ್ಟಕ್ಕೆ ಬಂದ.

	ಭಾರತೀಯ ವಾಸ್ತುಶಿಲ್ಪದ ಇತಿಹಾಸದಲ್ಲಿ ಈತನ ಆಳ್ವಿಕೆಯ ಕಾಲ ಗಮನಾರ್ಹವಾದ್ದು. ಈ ಕಾಲದ ಹಲವು ರಚನೆಗಳು ಮುಸ್ಲಿಮ್ ದಾಳಿಗೀಡಾಗಿ ನಾಶವಾಗಿವೆ. ಈತನ ದಂಡನಾಯಕ ವಿಮಲ ಕಟ್ಟಿಸಿದ ಅಬುವಿನ ಮನೋಹರ ಜಿನಾಲಯ, ಮೊಥೇರದ ಸೂರ್ಯ ದೇವಾಲಯ, ಮೂಲರಾಜನ ಸ್ಮರಣಾರ್ಥ ನಿರ್ಮಿಸಿದ ತ್ರಿಪುರುಷ ಪ್ರಾಸಾದ, ಭೀಮೇಶ್ವರ ಮತ್ತು ಭಟ್ಟಾರಿಕಾಭೀರು ಆಣಿ ದೇವಾಲಯಗಳು ಈ ಕಾಲದ ಮುಖ್ಯ ರಚನೆಗಳು. ಈತ ಸೋಮನಾಥ ದೇವಾಲಯವನ್ನು ಶಿಲಾಮಯ ಮಾಡಿಸಿದ. ಈತನ ರಾಣಿ ಉದಯಮತಿ ರಾಣಿ ಕಿ ಲಾವ್ ಸರೋವರ ಕಟ್ಟಸಿದಳು. ಭಾರತದಲ್ಲಿ ಪ್ರಾಚೀನತಮವೆನಿಸಿರುವ, ಅಹಮದಾಬಾದಿನ ಮಸೀದಿ ಈತನ ಆಳ್ವಿಕೆಯ ಕಾಲಕ್ಕೆ ಮತ್ತು ಪ್ರದೇಶಕ್ಕೆ ಸೇರಿದ್ದೆನ್ನುವುದು ಕುತೂಹಲಕರ ಅಂಶ.

	ಭೀಮ II : ಗುಜರಾತಿನ ಇನ್ನೊಬ್ಬ ಚಾಳುಕ್ಯ ದೊರೆ; 1178ರಿಂದ 1239ರ ತನಕ ರಾಜ್ಯವಾಳಿದ. ತಂದೆ ಅಜಯಪಾಲ ಮತ್ತು ತಾಯಿ ನೈಕಿದೇವಿ.

	ತರುಣನಾಗಿದ್ದಾಗಲೇ ಸಿಂಹಾಸನವೇರಿದ ಈತನಿಗೆ ಏಕಕಾಲದಲ್ಲಿ ಬಾಹ್ಯ ಹಾಗೂ ಆಂತರಿಕ ಶತ್ರುಗಳನ್ನು ಎದುರಿಸಬೇಕಾದ ಸಂದಿಗ್ಧ ಪರಿಸ್ಥಿತಿ ಉಂಟಾಯಿತು. ರಾಜ್ಯವನ್ನು ಹರಿದು ಹಂಚಿಕೊಳ್ಳಲು ಹವಣಿಸುತ್ತಿದ್ದ ಮಾಂಡಲಿಕರನ್ನು ನಿಗ್ರಹಿಸಿ ಆಂತರಿಕ ಭದ್ರತೆ ಸ್ಥಾಪಿಸಿಕೊಳ್ಳಬೇಕಾದ್ದು ಈತನ ಕರ್ತವ್ಯವಾಗಿತ್ತು. ಈ ಕೆಲಸದಲ್ಲಿ ಈತನಿಗೆ ಬೆಂಬಲ ನೀಡಿದವ ವಾಘೇಲವಂಶದ ಅರುಣೋರಾಜ; ಆತ ತನ್ನ ಪ್ರಭುವಿನ ಪರ ಹೋರಾಡುತ್ತಲೇ ಮೃತನಾದನೆಂದು ಇತಿವೃತ್ತಗಳು ತಿಳಿಸುತ್ತವೆ.

	ಹೊಯ್ಸಳ ಇಮ್ಮಡಿ ಬಲ್ಲಾಳನ ಶಾಸನಗಳಲ್ಲಿ ಆತ ಲಾಟ, ಗೂರ್ಜರ ಮತ್ತು ಮಾಳವರ ಮೇಲೆ ಸಾಧಿಸಿದ ಎನ್ನಲಾದ ವಿಜಯದ ಉಲ್ಲೇಖಗಳು ಕಂಡುಬರುತ್ತವೆ. ಆದರೆ ವಾಸ್ತವವಾಗಿ ಭೀಮನಿಗೆ ತೊಂದರೆಯುಂಟಾದುದು ದೇವಗಿರಿಯ ಸೇವುಣ ಅರಸರಾದ ಭಿಲ್ಲಮ, ಜೈತುಗಿ ಹಾಗೂ ಇಮ್ಮಡಿ ಸಿಂಘಣರಿಂದ. ಇವನನ್ನು ಸೋಲಿಸಿ ಮುನ್ನುಗ್ಗುತ್ತಿದ್ದ ಸೇವುಣ ಸಿಂಘಣನನ್ನು ತಡೆದು ನೆರವಿಗೆ ಬಂದವನೆಂದರೆ ಚಾಹಮಾನ ಕಲ್ಹಣ.

	ಚಾಹಮನ ಮುಮ್ಮಡಿ ಪೃಥ್ವೀರಾಜನಿಗೆ ನಿಶ್ಚಿತವಾಗಿದ್ದ ಕನ್ಯೆಯನ್ನು ಈತ ಬಯಸಿದ್ದರಿಂದ ಹೋರಾಟ ನಡೆದು ಪೃಥ್ವೀರಾಜನ ತಂದೆ ಸೋಮೇಶ್ವರ ಮೃತನಾದ; ಕೋಪೋದ್ರಿಕ್ತ ಪೃಥ್ವೀರಾಜ ಭೀಮನನ್ನು ಕೊಂದುಹಾಕಿದನೆಂದು ಪೃಥ್ವೀರಾಜರಾಸೋ ಎಂಬ ಗ್ರಂಥದಲ್ಲಿ ಉಲ್ಲೇಖಿಸಲಾಗಿದೆ. ಆದರೆ ಈ ಇಬ್ಬರು ದೊರೆಗಳ ಕಾಲಾನುಪೂರ್ವಿ ಹೊಂದುವುದಿಲ್ಲವಾದ ಕಾರಣ ಈ ಘಟನೆ ಸಂಪೂರ್ಣ ಕಾಲ್ಪನಿಕವೆಂಬುದು ವಿದ್ವಾಂಸರ ಅಭಿಪ್ರಾಯ.

	ಮೊದಲನೆಯ ಭೀಮನ ಕಾಲದಲ್ಲಿ ನಡೆದ ಹಾಗೆ ಈತನ ಕಾಲದಲ್ಲಿ ಮುಸ್ಲಿಮರ ಆಕ್ರಮಣಗಳು ನಡೆದುವು. 1178ರಲ್ಲಿ ದಾಳಿ ಇಟ್ಟ ಮಹಮದ್ ಘೋರಿ ಈತನಿಂದ ಪರಾಜಿತನಾದ. ಕುತ್ಬ್-ಉದ್-ದೀನದೊಡನೆ ಸಂಭವಿಸಿದ ಹೋರಾಟವೊಂದರಲ್ಲಿ ಈತನ ಸೇನಾನಿ ಜಾತ್ವಾನ್ ಹತನಾದ. ಈತ ರಾಜಧಾನಿ ಬಿಟ್ಟು ಸುರಕ್ಷಿತ ತಾಣಕ್ಕೆ ಪಲಾಯನಗೈದ. ಅಪಾರ ಸಂಪತ್ತು ಮುಸ್ಲಿಮ್ ದಾಳಿಕಾರನ ವಶವಾಯಿತು. ಇನ್ನೊಮ್ಮೆ ನಡೆದ ಹೋರಾಟದಲ್ಲಿ ಈತನಿಗೆ ಮೇಲುಗೈಯಾದಾಗ ಕಂಗಾಲಾಗಿದ್ದ ಮುಸ್ಲಿಮ್ ದೊರೆಯ ನೆರವಿಗೆ ಘಜ್ನಿಯ ದೊಡ್ಡ ಸೈನ್ಯ ಧಾವಿಸಿ, ಆತ ಪಾರಾದ. ಸೋಲಿನ ಸೇಡು ತೀರಿಸಿಕೊಳ್ಳಲು 1197ರಲ್ಲಿ ಕುತ್ಬ್-ಉದ್-ದೀನ್ ಮತ್ತೊಮ್ಮೆ ದಾಳಿ ಮಾಡಿದ. ಈ ಹೋರಾಟದಲ್ಲಿ ಭೀಮನ ಪರವಾಗಿ ಚಾಹಮಾನ ಕೀರ್ತಿಪಾಲ (ರಾಯ್ ಕಿರಣ್), ಪ್ರಹ್ಲಾದನ (ವಾಲ್ಲಾನ್) ಹಾಗೂ ಪರಮಾರ ಧಾರಾವರ್ಷ (ದರಬರಸ್) ಮೊದಲಾದವರು ಹೋರಾಡಿದರೂ ಚೌಳುಕ್ಯ ಸೈನ್ಯಕ್ಕೆ ಅಪಾರ ಸಾವುನೋವು ಸಂಭವಿಸಿತು.

	ಮುಸ್ಲಿಮರ ದಾಳಿಗಳನ್ನೆದುರಿಸಿ ಹಣ್ಣಾಗಿದ್ದ ಈತನಿಗೂ ತಮ್ಮ ಶಕ್ತಿಯನ್ನು ಸಂವರ್ಧಿಸಿಕೊಂಡಿದ್ದ ಪರಮಾರ ಸುಭಟವರ್ಮನಿಗೂ ಕಿತ್ತಾಟ ಆರಂಭವಾಯಿತು. 1195-1213ರ ನಡುವೆ ಲಾಟ ಪ್ರದೇಶ ಪರಮಾರರ ವಶವಾಯಿತು. ಸೇವುಣರೂ ಈ ಪ್ರದೇಶದ ಪ್ರಭುತ್ವಕ್ಕಾಗಿ ಸೆಣಸಾಡುತ್ತಿದ್ದರು.

	ಚೌಳುಕ್ಯಕುಕಲ್ಪವಲ್ಲೀ ವಿಸ್ತಾರಣದೀಪ್ತ ಮತ್ತು ಅಭಿನವಸಿದ್ಧರಾಜ ಎಂದು ವರ್ಣಿತನಾದ ಜಯಂತಸಿಂಹನಿಂದಾಗಿ ಭೀಮ ಸ್ವಲ್ಪಕಾಲ ರಾಜಧಾನಿಯನ್ನು ಬಿಟ್ಟಿರಬೇಕಾಯಿತೆಂದು ತಿಳಿದುಬರುತ್ತದೆ. ಇದು ಸುಮಾರು 1205-1210ರ ನಡುವೆ ಯಾವಾಗಲೋ ಉಂಟಾದ ಪರಿಸ್ಥಿತಿ. ಈ ಘಟನೆ ಸೋಮೇಶ್ವರನ ಸುರಥೋತ್ಸವ ಕೃತಿಯ ಮೇಲೆ ಪ್ರಭಾವ ಬೀರಿದೆ ಎಂದು ಹೇಳಲಾಗಿದೆ. ಈತನ ಆಳ್ವಿಕೆಯ ಕಾಲದಲ್ಲಿ ವಾಘೇಲವಂಶದ ಲವಣಪ್ರಸಾದ ಮತ್ತು ಆತನ ಮಗ ವೀರಧವಳರ ಪಾತ್ರ ಗಮನಾರ್ಹವಾದ್ದು. ಪ್ರತೀಹಾರ ಜಗದ್ದೇವ ಈತನ ಮಹಾಪ್ರಧಾನಿಯಾಗಿದ್ದ.

	ಸಪ್ತಮಚಕ್ರವರ್ತಿ, ಬಾಲನಾರಾಯಣ, ಅಭಿನವಸಿದ್ಧರಾಜ ಹಾಗೂ ಮಹಾರಾಜಾಧಿರಾಜ ಎಂದು ವರ್ಣಿತನಾದ ಈತ ಚೌಳುಕ್ಯ ಮನೆತನದ ಇತಿಹಾಸದಲ್ಲೇ ದೀರ್ಘಕಾಲ ಆಳಿದ ಅರಸ. ಲೀಲಾದೇವಿ ಹಾಗೂ ಸುಮಲದೇವಿ ಅಥವಾ ಸೋಮಲದೇವಿ ಈತನ ರಾಣಿಯರು. ಇತಿವೃತ್ತಗಳು ಭೀಮನನ್ನು ಉದಾರಿ, ದಾನಿಯೆಂದು ವರ್ಣಿಸುತ್ತವೆ. ಈತನ ಅನಂತರ ತ್ರಿಭುವನಪಾಲ ಪಟ್ಟವೇರಿದ. ಸೋಮನಾಥ ದೇವಾಲಯಕ್ಕೆ ಸೇರ್ಪಡೆಯಾಗಿ ಈತ ಮೇಘನಾದ ಅಥವಾ ಮೇಘಧ್ವನಿ ಎಂಬ ಮಂಟಪ ಕಟ್ಟಿಸಿದ. ಅಬುವಿನ ತೇಜಪಾಲ ದೇವಾಲಯ ಈ ಕಾಲದ ಗಮನಾರ್ಹ ರಚನೆ. ಲವಣಪ್ರಸಾದನ ಮಗ ವೀರಮ ಕಟ್ಟಿಸಿದ ದೇಗುಲವೊಂದಕ್ಕೆ ಈತ ದತ್ತಿಬಿಟ್ಟನೆಂದು ತಿಳಿದುಬರುತ್ತದೆ.

	ಭೀಮ I : ಮುಮ್ಮಡಿ ಗುಣಗ ವಿಜಯಾದಿತ್ಯನ (848-92) ಮರಣಾನಂತರ ಅಧಿಕಾರಕ್ಕೆ ಬಂದ ವೆಂಗಿಯ (ಆಂಧ್ರಪ್ರದೇಶದ ಈಗಿನ ಪೆದ್ದವೇಗಿ) ಚಾಳುಕ್ಯ ದೊರೆ. ತಂದೆ ಒಂದನೆಯ ವಿಕ್ರಮಾದಿತ್ಯ. ಆಳ್ವಿಕೆಯ ಕಾಲ 892-922. ಈತನಿಗೆ ದ್ರೋಹಾರ್ಜುನ ಮತ್ತು ಶೌಚಕಂದರ್ಪ ಎಂಬ ಬಿರುದುಗಳಿದ್ದುವು.

	ಸಿಂಹಾಸನ ಏರುವ ಮೊದಲೇ ಈತ ದಾಯಾದಿಗಳ ಬೆಂಬಲದಿಂದ ಆಕ್ರಮಣ ನಡೆಸಿದ ರಾಷ್ಟ್ರಕೂಟರೊಡನೆ ಹೋರಾಡಬೇಕಾಯಿತು. ಗುಣಗ ವಿಜಯಾದಿತ್ಯನಿಂದ ಪರಾಜಿತನಾಗಿದ್ದ ರಾಷ್ಟ್ರಕೂಟ ಇಮ್ಮಡಿ ಕೃಷ್ಣ ಸೇಡು ತೀರಿಸಿಕೊಳ್ಳಲು ಕಾದಿದ್ದ; ಭೀಮನ ಚಿಕ್ಕಪ್ಪ ಒಂದನೆಯ ಯುದ್ಧ ಮಲ್ಲನಿಗೆ ಸಹಾಯಮಾಡುವ ನೆವದಿಂದ ಕೃಷ್ಣ ವೆಂಗಿಯನ್ನು ಆಕ್ರಮಿಸಿದ. ಈ ಆಕ್ರಮಣದ ವಿವರ ತಿಳಿದಿಲ್ಲವಾದರೂ ಚಾಳುಕ್ಯ ಸೈನ್ಯಕ್ಕೆ ಸೋಲಾಗಿ ರಾಜ್ಯದ ಬಲುಭಾಗ ರಾಷ್ಟ್ರಕೂಟರ ವಶವಾಯಿತು. ಈತನನ್ನು ರಾಷ್ಟ್ರಕೂಟ ಸಾಮಂತ ಮತ್ತು ವೇಮುಲವಾಡ ಚಾಳುಕ್ಯ ಮನೆತನದ ಅರಸ ಬದ್ದೆಗ ಸೆರೆಹಿಡಿದ. ಕನ್ನಡ ಕವಿ ಪಂಪ ಈ ಘಟನೆಯನ್ನು ಮೊಸಳೆಯಿಂ ಪಿಡಿವನ್ತಿರ್ ನೀರೊಳೊತ್ತಿ ಭೀಮನನತಿ ಗರ್ವದಿಂಪಿಡಿಯೆ ಎಂದು ಬಣ್ಣಿಸಿದ್ದಾನೆ. ಆದರೆ ಶೀಘ್ರವೇ ಭೀಮ ಹೇಗೋ ಸ್ವತಂತ್ರನಾದ. ರಾಷ್ಟ್ರಕೂಟ ವಿಜಯ ತಾತ್ಕಾಲಿಕ ಸ್ವರೂಪದ್ದಾಗಿತ್ತು. ಈತನ ಬೆಂಬಲಕ್ಕೆ ರಣಮರ್ದ ಪ್ರದೇಶ ಆಳುತ್ತಿದ್ದ ಮುದುಗೊಂಡ ಚಾಳುಕ್ಯ ಅಧಿಪ ಒಂದನೆಯ ಕುಸುಮಾಯುಧನ ನೇತೃತ್ವದಲ್ಲಿ ಸಾಮಂತರು ಮತ್ತು ಚಾಳುಕ್ಯ ವಂಶನಿಷ್ಠರು ಅಚಲ ಸ್ಥೈರ್ಯದಿಂದ ಒಗ್ಗೂಡಿದರು. ಈತ 892 ಎಪ್ರಿಲ್ 17ರಂದು ಪಟ್ಟಾಭಿಷಿಕ್ತನಾಗಿ ವಿಷ್ಣುವರ್ಧನ ಎಂಬ ಹೆಸರು ಧರಿಸಿದ.

	ಕೆಲವೇ ವರ್ಷಗಳ ಅನಂತರದಲ್ಲಿ ಇಮ್ಮಡಿ ಕೃಷ್ಣ ಸೇನಾನಿ ಗುಂಡಯನ ನೇತೃತ್ವದಲ್ಲಿ ವೆಂಗಿಯ ವಿರುದ್ಧ ಸೈನ್ಯ ಕಳುಹಿಸಿದ. ವೆಂಗಿ ರಾಜಧಾನಿಯ ಬಳಿ ನಿರವದ್ಯಪುರದಲ್ಲಿ ಉಂಟಾದ ಹೋರಾಟದಲ್ಲಿ ರಾಷ್ಟ್ರಕೂಟ ಸೈನ್ಯವನ್ನು ಈತನ ಮಗ ಇ¾Éಮ¾É್ತಗಂಡ ಸೋಲಿಸಿದ. ಪುನಃ ಪೆರುವಂಗೂರು ಎಂಬಲ್ಲಿ ಸಂಭವಿಸಿದ ಕದನದಲ್ಲಿ ದಂಡನಾಯಕ ಗುಂಡಯ ಮೃತನಾದ; ಕರ್ಣಾಟಕ-ಲಾಟ ಸೈನ್ಯ ಚದರಿ ಚೆಲ್ಲಾಪಿಲ್ಲಿಯಾಯಿತು. ಚಾಳುಕ್ಯ ಸೈನ್ಯಕ್ಕೆ ವಿಜಯ ದೊರೆತರೂ ಭೀಮನ ಮಗ ಇ¾ಮ¾್ತಗಂಡ ಹೋರಾಡುತ್ತಲೇ ಮೃತನಾದ.

	ಈತನ ಆಳ್ವಿಕೆಯ ಉಳಿದ ಕಾಲ ಶಾಂತಿಯುತವಾಗಿತ್ತು. ಈತನ ಮೂರು ಮಕ್ಕಳಲ್ಲಿ ಉಳಿದವರು ವಿಜಯಾದಿತ್ಯ ಮತ್ತು ವಿಕ್ರಮಾದಿತ್ಯ. ಕಾವ್ಯಾಲಂಕಾರ ಸೂತ್ರಗಳ ಕರ್ತೃವೆನ್ನಲಾದ ಭಟ್ಟವಾಮನ ಈತನ ಆಸ್ಥಾನದಲ್ಲಿದ್ದ. ಕವಿ ವೃಷಭನೆಂದು ವರ್ಣಿತನಾದ ವಾಮನ ಈ ಅರಸನ ಕೆಲವು ಪ್ರಶಸ್ತಿ ಶಾಸನಗಳನ್ನು ರಚಿಸಿದ. ವೆಂಗಿ ಚಾಳುಕ್ಯ ಶಾಸನಗಳಲ್ಲಿ ಮೊದಲಬಾರಿಗೆ ಶಕವರ್ಷ ಬಳಸಿದ ಕೀರ್ತಿ ಈತನದು. ಚಾಳುಕ್ಯ ಭೀಮಾವರಮ್ ಮತ್ತು ದ್ರಾಕ್ಷಾರಾಮಗಳಲ್ಲಿ ಈತ ದೇವಾಲಯಗಳನ್ನು ಕಟ್ಟಿಸಿದ. ಈತನ ಅನಂತರ ನಾಲ್ಕನೆಯ ವಿಜಯಾದಿತ್ಯ ಅರಸನಾದ.

	ಭೀಮ2 : ವೆಂಗಿಯ ಚಾಳುಕ್ಯ ಭೀಮನ ಮೊಮ್ಮಗ. ತಂದೆ ನಾಲ್ಕನೆಯ ವಿಜಯಾದಿತ್ಯ ಮತ್ತು ತಾಯಿ ಮೇಲಾಂಬಾ. ಆಳ್ವಿಕೆಯ ಕಾಲ 935-47.

	ವೆಂಗಿ ರಾಜ್ಯವನ್ನು ರಾಷ್ಟ್ರಕೂಟರ ಬೆಂಬಲವಿದ್ದ ಯುದ್ಧಮಲ್ಲನಿಂದ ಪಡೆಯಲು ಈತ ಅವಕಾಶ ಕಾಯುತ್ತಿದ್ದ. ನಾಲ್ಕನೆಯ ಗೋವಿಂದನ ಕಾಲದಲ್ಲಿ ಉಂಟಾದ ದಂಗೆ ಅಡಗಿಸುವುದರಲ್ಲಿ ರಾಷ್ಟ್ರಕೂಟರು ನಿರತರಾಗಿದ್ದಾಗ ಈತ ಯುದ್ಧಮಲ್ಲನನ್ನು ಓಡಿಸಿ ರಾಜನಾದ. ಐದು ವರ್ಷಗಳ ತೀವ್ರ ಸೆಣಸಾಟದ ಅನಂತರ ರಾಷ್ಟ್ರಕೂಟರನ್ನು ಚಾಳುಕ್ಯ ಪ್ರದೇಶದಿಂದ ಹಿಮ್ಮೆಟ್ಟಿಸಿ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಸ್ಥಾಪಿಸುವಲ್ಲಿ ಯಶಸ್ವಿಯಾದ. ನಾಲ್ವಡಿ ಗೋವಿಂದ ವೆಂಗಿಯ ಮೇಲೆ ಹಿಡಿತಸಾಧಿಸಲು ಮಾಡಿದ ಪ್ರಯತ್ನ ಸಫಲವಾಗಲಿಲ್ಲ. ಯುದ್ಧಮಲ್ಲ ರಕ್ಷಣೆಗಾಗಿ ಪಲಾಯನ ಮಾಡಬೇಕಾಯಿತು. ಈ ಹೋರಾಟಗಳಲ್ಲಿ ಈತನಿಗೂ ಚಾಳುಕ್ಯ ಇಮ್ಮಡಿ ಅರಿಕೇಸರಿಗೂ ರಹಸ್ಯ ಒಪ್ಪಂದವೇರ್ಪಟ್ಟಂತೆ ತೋರುತ್ತದೆ.

	934-35ರಲ್ಲಿ ಪಟ್ಟಾಭಿಷಿಕ್ತನಾದ ಈತನಿಗೆ ವಿಷ್ಣುವರ್ಧನ ಎಂಬ ಅಧಿಕೃತ ಹೆಸರಲ್ಲದೆ ಗಂಡಮಹೇಂದ್ರ, ರಾಜಮಾರ್ತಾಂಡ, ರಾಜಭೀಮ ಇತ್ಯಾದಿ ಬಿರುದುಗಳಿದ್ದುವೆಂದು ತಿಳಿದುಬರುತ್ತದೆ. ಈತ ತಾತಬಿಕ್ಲ ವಳದಿ (ಧಳಗ), ಮುನ್ನಿ¾ವ, ರಾಜಮಾರ್ತಾಂಡ, ರಾಜಮಯ್ಯ, ಬಿಜ್ಜ, ಅಯ್ಯಂತ ಮೊದಲಾದವರನ್ನು ಸೋಲಿಸಿ ಕೊಂದನೆಂದು ಶಾಸನಗಳು ಉತ್ಪ್ರೇಕ್ಷಿಸುತ್ತವೆ. ಇವರಲ್ಲಿ ಎಲ್ಲರನ್ನೂ ಗುರುತಿಸಲು ಸಾಧ್ಯವಾಗಿಲ್ಲ.

	ಈತ ಹನ್ನೆರಡು ವರ್ಷ ರಾಜ್ಯವಾಳಿದರೂ ಈತನ ಬಗ್ಗೆ ಹೆಚ್ಚೇನೂ ತಿಳಿದು ಬಂದಿಲ್ಲ. ರಾಜ್ಯಾಡಳಿತದ ವ್ಯವಹಾರಗಳಲ್ಲಿ ಈತನಿಗೆ ನೆರವಾಗುತ್ತಿದ್ದವ ಪಾನರವಂಶದ ರಾಜಪುತ್ರ ವಿಜಯ. ಊರ್ಜಪಾ ಅಥವಾ ಅಂಕಿದೇವಿ ಮತ್ತು ಲೋಕಾಂಬಿಕಾ ಎಂಬ ರಾಣಿಯರಲ್ಲಿ ಭೀಮನಿಗೆ ಕ್ರಮವಾಗಿ ದಾನಾರ್ಣವ ಮತ್ತು ಇಮ್ಮಡಿ ಅಮ್ಮ ಎಂಬ ಪುತ್ರರು ಜನಿಸಿದರು. ಈತನ ಅನಂತರ ಇಮ್ಮಡಿ ಅಮ್ಮ ಅಧಿಕಾರರೂಢನಾದ.

	ಭೀಮ ಹೆಸರಿನ ಕಳಿಂಗದ ಗಂಗ ಅರಸನೂ ಇದ್ದ.
(ಎಚ್.ಎಂ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ